ಶರಣ ಲದ್ದೆಯ ಸೋಮಯ್ಯನವರ ವಚನಗಳು

ಅಂಕಿತ: ಭಾಪು ಲದ್ದೆಯ ಸೋಮಾ

ಕಾಯಕ: ಹುಲ್ಲನ್ನು ಕೊಯ್ದು ಪಿಂಡಿ ಮಾಡಿ ಮಾರುವುದು

ವಿವರಣೆ : ಇವರು ಲದ್ದೆ ಗ್ರಾಮಕ್ಕೆ ಸೇರಿದವರು. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂದಿನ ಲಾಧಾ ಗ್ರಾಮವಿದಾಗಿರಬೇಕೆಂದು ಊಹಿಸಲಾಗಿದೆ. ಬನವಾಸಿಯ ಮಧುಕೇಶ್ವರ ದೇವಸ್ಥಾನದ ಶವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಇವರ ವಿಗ್ರಹವೂ ಇದೆ. ಕಾಲ ೧೨೦೦. ತಮ್ಮ ಹೆಸರನ್ನೇ (ಲದ್ದೆಯ ಸೋಮ) ಅಂಕಿತವನ್ನಾಗಿ ಮಾಡಿಕೊಂಡ ಇವರ ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ಸ್ವಕಾಯಕವ ಮಾಡಿ, ದೇವರ ಹಂಗಿಲ್ಲದೆ ಧೈರ್ಯದಿಂದ ಬದುಕಬೇಕೆಂಬ ಬದುಕಿನ ವಾಸ್ತವವನ್ನು ತುಂಬ ನಿಷ್ಠುರ ಮಾತುಗಳಿಂದ ತಿಳಿಸುತ್ತಾರೆ.

  1. ಆವ ಕಾಯಕವಾದಡೂ ಸ್ವಕಾಯಕವ ಮಾಡಿ
    ಗುರು ಲಿಂಗ ಜಂಗಮದ ಮುಂದಿಟ್ಟು,
    ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
    ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
    ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
    /1